Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs

ನಮ್ಮ ನುಡಿ

 

     ಕರ್ನಾಟಕ ಸಾಹಿತ್ಯದ ಪ್ರಮುಖ ಪ್ರಕಾರಗಳಲ್ಲಿ ವಚನಸಾಹಿತ್ಯವು ವಿಶಿಷ್ಟವಾದುದಾಗಿದೆ. 12ನೇ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಚಳವಳಿಯ ಫಲವಾಗಿ ಅಭಿವ್ಯಕ್ತಿಗೊಂಡ ಈ ವಚನಸಾಹಿತ್ಯವು ಸಮಾಜದ ಎಲ್ಲ ವರ್ಗಗಳ ವಿಚಾರ, ಚಿಂತನೆಗಳ ಫಲವಾಗಿದೆ.  ಕನ್ನಡ ಸಾಹಿತ್ಯದ ದಿಕ್ಕನ್ನು ಬದಲಿಸಿದ ವೈಚಾರಿಕ ಪ್ರಪಂಚಕ್ಕೆ ಅಮುಲ್ಯ ಕೊಡುಗೆ ನೀಡಿದ ಸಾಹಿತ್ಯ ಪ್ರಕಾರವಾಗಿದೆ.

 

     ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಸಿದ್ದರಾಮ-ಹೀಗೆ ನೂರಾರು ಶಿವಶರಣರು ವಚನಸಾಹಿತ್ಯಕ್ಕೆ ಹೊಸ ಶಕ್ತಿಯನ್ನು ಹೊಸ ಚೇತನವನ್ನು ನೀಡಿದ್ದಾರೆ. ಭಾಷೆ, ಭಾವ, ಅಭಿವ್ಯಕ್ತಿ ದೃಷ್ಟಿಯಿಂದ ಅನನ್ಯವೆನಿಸಿರುವ ಈ ವಚನಸಾಹಿತ್ಯವನ್ನು ಸಂಪಾದಿಸಿ, ಪ್ರಕಟಿಸುವ ಕಾರ್ಯ ಕನ್ನಡ ನಾಡಿನಲ್ಲಿ 19ನೇ ಶತಮಾನದ ಕೊನೆಯ ಭಾಗದಲ್ಲಿ ಆರಂಭವಾಯಿತ್ತಾದರೂ ನಂತರದ ಒಂದು ಶತಮಾನದ ಅವಧಿಯಲ್ಲಿ ಅನೇಕ ವಿದ್ವಾಂಸರು ಅಹರ್ನಿಶಿ ದುಡಿದ ಫಲವಾಗಿ ಸರ್ಕಾರವು ಸಮಗ್ರ ವಚನಸಾಹಿತ್ಯದ ಪ್ರಕಟನ ಯೋಜನೆಯನ್ನು ಕೈಗೊಳ್ಳುವಂತಾಯಿತು.  ಈ ಯೋಜನೆಯಡಿ ಬಸವಪೂರ್ವದ, ಬಸವಾದಿ ವಚನಕಾರರು ಹಾಗೂ ಬಸವೋತ್ತರ ಯುಗದ ಅಂದರೆ 19ನೇ ಶತಮಾನದ ಅಂತ್ಯದವರೆಗಿನ ವಚನಸಾಹಿತ್ಯ ಪರಂಪರೆಯ ಎಲ್ಲ ವಚನಕಾರರ ವಚನಗಳನ್ನು ಸಂಗ್ರಹಿಸಿ ಪ್ರಕಟಿಸಲಾಗಿದೆ.

 

     1984ರಲ್ಲಿ ಸರ್ಕಾರವು ಕೈಗೆತ್ತಿಕೊಂಡ ಸಮಗ್ರ ವಚನಸಾಹಿತ್ಯ ಪ್ರಕಟನ ಯೋಜನೆಯು 1993ರಲ್ಲಿ ಪೂರ್ಣಗೊಂಡು 15 ಸಂಪುಟಗಳಲ್ಲಿ ಪ್ರಕಟವಾಯಿತು.  ಸುಮಾರು 10,000 ಪುಟಗಳ, ಸುಮಾರು 20,000 ವಚನಗಳನ್ನು ಸಮಗ್ರವಾಗಿ ಹೊರತರಲಾದ ಈ ಮಹತ್ವಕಾಂಕ್ಷೆ ಯೋಜನೆಯು ಕನ್ನಡ ಪ್ರಕಟಣಾ ಚರಿತ್ರೆಯಲ್ಲಿ ಒಂದು ಸ್ಮರಣೀಯ ದಾಖಲೆಯಾಗಿದೆ.

 

      ಈ ಬೃಹತ್ ಸಾಹಿತ್ಯವನ್ನು ಸಂಪಾದನೆ ಮಾಡಿಕೊಟ್ಟ ಸಂಪಾದಕ ಮಂಡಳಿಯ ಪ್ರಧಾನ ಸಂಪಾದಕರಾದ ಡಾ.ಎಂ.ಎಂ.ಕಲಬುರ್ಗಿ,ಸದಸ್ಯರಾದ ಡಾ.ಎಂ.ಚಿದಾನಂದಮೂರ್ತಿ, ಡಾ. ಸಿ.ಪಿ. ಕೃಷ್ಣಕುಮಾರ್, ಡಾ.ಎಸ್.ವಿದ್ಯಾಶಂಕರ್ ಮತ್ತು ಶ್ರೀ ಎಸ್.ಶಿವಣ್ಣ ಅವರಿಗೆ ನನ್ನ ಅಭಿನಂದನಾ ಪೂರ್ವಕ ಕೃತಜ್ಞತೆಗಳು.

 

     ನಂತರ 2001ರಲ್ಲಿ ಸಮಗ್ರ ವಚನಸಾಹಿತ್ಯದ 2ನೇ ಆವೃತ್ತಿ ಪ್ರಕಟವಾಯಿತು. ಹೊಸ ವಿಚಾರ, ಹೊಸ ಶೋಧನೆಗಳ ಬೆಳಕಿನಲ್ಲಿ ಲಭ್ಯ ವಚನಗಳನ್ನು 15 ಸಂಪುಟಗಳಲ್ಲಿ ಹೊರತರಲಾಯಿತು.

 

     ಆಧುನಿಕ ತಂತ್ರಜ್ಞಾನದ ಬೆಳಕಿನಲ್ಲಿ ಸಮಗ್ರ ವಚನಸಾಹಿತ್ಯವನ್ನು ವಿಶ್ವದಾದ್ಯಂತ ಪ್ರಚುರ ಪಡಿಸುವ ಕಾರ್ಯದ ಅಗತ್ಯಗಳನ್ನು ಮನಗಂಡ ಸರ್ಕಾರವು ಈ ದಿಸೆಯಲ್ಲಿ ಕಾರ್ಯಪ್ರವೃತ್ತ ವಾಯಿತು. ಸಮಗ್ರ ವಚನಸಾಹಿತ್ಯವನ್ನು ಅಂತರಜಾಲದ ಮೂಲಕ ಬಹುಮಾಧ್ಯಮ ರೂಪದಲ್ಲಿ ಜನರಿಗೆ ತಲುಪಿಸುವ ಕಲ್ಪನೆಯೇ ಒಂದು ರೋಮಾಂಚಕಾರಿಯಾದ ಸಂಗತಿಯಾಗಿದೆ.

 

      ಈ ಬೃಹತ್ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಕನ್ನಡ ತಂತ್ರಾಂಶದ ತೊಡಕನ್ನು ನಿವಾರಿಸಿಕೊಂಡು ಕನ್ನಡ ಗಣಕ ಪರಿಷತ್ತು, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‍ಐಸಿ.), ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಮಹಾಭಾರತ ಸಂಶೋಧನಾ ಪ್ರತಿಷ್ಠಾನ, ವಿಷುಯಲ್ ಆಟ್ರ್ಸ್ ಮುಂತಾದ ಹಲವಾರು ಖಾಸಗಿ ತಂತ್ರಾಂಶಗಳ ಕಂಪನಿಯವರೊಂದಿಗೆ ಸಮಾಲೋಚಿಸಿ, ಒಂದು ಮಾದರಿ ಯೋಜನೆಯನ್ನು ರೂಪಿಸಲಾಯಿತು. ವಚನಗಳ ಮೊದಲ ಸಾಲುಗಳ ಅಕಾರಾದಿ ವಿಂಗಡನೆ, ಕನ್ನಡ ಪಠ್ಯದ ಪ್ರದರ್ಶನ ಮುಂತಾದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲಾಯಿತು. ಒಟ್ಟಾರೆ ಒಂದು ಸಮರ್ಪಕವೆನ್ನಬಹುದಾದ ಕನ್ನಡ ತಂತ್ರಾಂಶವನ್ನು ರೂಪಿಸಲಾಯಿತು.            

 

     ಈ ಬೃಹತ್ ಯೋಜನೆಯನ್ನು ಕರ್ನಾಟಕ ಸರ್ಕಾರದ ಉದ್ಯಮವಾದ ಎಂ.ಎಸ್.ಐ.ಎಲ್ ಸಂಸ್ಥೆಯ ಸಹಕಾರದಿಂದ ಅನುಷ್ಠಾನಗೊಳಿಸಲಾಯಿತು.  ಇದೀಗ ಸಮಗ್ರ ವಚನಸಾಹಿತ್ಯವನ್ನು  ವಿಶ್ವದಾದ್ಯಂತ ಆಸಕ್ತ ಜನ ತಾವಿರುವಲ್ಲಿಯೇ ವೀಕ್ಷಿಸುವ, ಪಠ್ಯವನ್ನು ಉಚಿತವಾಗಿ ಪಡೆದುಕೊಳ್ಳುವ ಹಾಗೂ ಆಲಿಸುವ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗಿದೆ.

 

     ಸಮಗ್ರ ವಚನಸಾಹಿತ್ಯದ ಯೋಜನೆಯಲ್ಲಿ ಸುಮಾರು 249 ಜನ ವಚನಕಾರರ, ಸುಮಾರು 21.674 ವಚನಗಳನ್ನು ಸಂಗ್ರಹಿಸಲಾಗಿದೆ.  ಈ ವಚನಗಳಿಂದ ಆಯ್ದ 1000 ವಚನಗಳನ್ನು ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ, ವಿವಿಧ ಗಾಯಕರಿಂದ ಹಾಡಿಸಿ, ಧ್ವನಿ ಮುದ್ರಿಸಿ, ಅಂತರಜಾಲಕ್ಕೆ ಅಳವಡಿಸಲಾಗಿದೆ.

 

ವಚನ ಸಾಹಿತ್ಯದ ವೆಬ್‍ಸೈಟ್ ವಿಳಾಸ vachanasahitya.kannadasiri.co.inದಯವಿಟ್ಟು ಎಲ್ಲ ಆಸಕ್ತರು ಒಮ್ಮೆ ಈ ಅಂತರಜಾಲತಾಣವನ್ನು ವೀಕ್ಷಿಸಿ ಎಂದು ವಿನಂತಿಸುತ್ತೇನೆ.

 

     ಸಮಗ್ರ ವಚನಸಾಹಿತ್ಯದ ಬಹುಮಾಧ್ಯಮ ಯೋಜನೆಗೆ ವಿದ್ವಾಂಸರು, ಸಂಗೀತಗಾರರು, ತಂತ್ರಜ್ಞರು ಹಾಗೂ ತಾಂತ್ರಿಕ ಪರಿಣತಿ ಹೊಂದಿರುವ ಸಲಹೆಗಾರರು ಹೀಗೆ ಹಲವಾರು ಜನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ತಮ್ಮ ಸಲಹೆ ಸಹಕಾರವನ್ನು ನೀಡಿ ಈ ಯೋಜನೆಯ ಅನುಷ್ಠಾನಕ್ಕೆ ನೆರವಾಗಿದ್ದಾರೆ ಅವರೆಲ್ಲರಿಗೂ ಸರ್ಕಾರದ ಕೃತಜ್ಞತೆಗಳು.

 

 

 

                                                                                                              ಡಾ. ಎನ್. ನಾಗಾಂಬಿಕಾದೇವಿ
   01.03.2015                                                                                              ಮುಖ್ಯ ಕಾರ್ಯದರ್ಶಿಗಳು
   ಬೆಂಗಳೂರು                                                                                             ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Bloom Consulting Services.