Search Literature Discussion FAQ's Authors Vachanas Other Writeups
Home Search Vachanakaras Vachanas Vachana Songs

ಹೊನ್ನುಡಿ

 

     ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ಹನ್ನೆರಡನೆಯ ಶತಮಾನವು ಸುವರ್ಣಾಧ್ಯಾಯವನ್ನು ನೀಡಿದೆ. ಅದು ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯ ಕ್ರಾಂತಿಯಿಂದಾಗಿ ರಾಷ್ಟ್ರಜೀವನದ ಗತಿಯನ್ನೇ ಬದಲಿಸಿದ ಸತ್ವಶಾಲಿಯುಗ. ಈ ಶಿವಶರಣರ ಚಳವಳಿ ಒಂದು ಅಪೂರ್ವ ಘಟನೆ; ವಚನಗಳ ಸೃಷ್ಟಿ ಒಂದು ಅನನ್ಯ ಪ್ರಯೋಗ. ಸಮಾಜದ ಎಲ್ಲ ವರ್ಗ, ಎಲ್ಲ ವರ್ಣಗಳ ಜನಸಮುದಾಯವು ಈ ವಚನ ನಿಧಿಗೆ ಕೊಡುಗೆ ನೀಡಿರುವುದು ವಿಶೇಷ.

 

     ಈ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 1993ರಲ್ಲಿ ಸಮಗ್ರ ವಚನ ಸಾಹಿತ್ಯವನ್ನು 15 ಸಂಪುಟಗಳಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗಿತ್ತು. ನಂತರ 2001ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಸಮಗ್ರ ವಚನಸಾಹಿತ್ಯದ 2ನೇ ಆವೃತ್ತಿ ಪ್ರಕಟವಾಯಿತು. ಹೊಸ ವಿಚಾರ, ಹೊಸ ಶೋಧನೆಗಳ ಬೆಳಕಿನಲ್ಲಿ ಲಭ್ಯ ವಚನಗಳನ್ನು 15 ಸಂಪುಟಗಳಲ್ಲಿ ಹೊರತರಲಾಯಿತು. ಆದರೆ ಇಂದಿನ ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ಸಮಗ್ರ ವಚನಸಾಹಿತ್ಯವನ್ನು ಜಗತ್ತಿನಾದ್ಯಂತ ಪ್ರಚುರಪಡಿಸುವ ಕಾರ್ಯದ ಅಗತ್ಯತೆಯನ್ನು ಮನಗಂಡು ಅಂತರ್ಜಾಲದ ಮೂಲಕ ಬಹುಮಾಧ್ಯಮದ ರೂಪದಲ್ಲಿ ಜನರಿಗೆ ತಲುಪಿಸುವ ಪರಿಕಲ್ಪನೆಯು ಒಂದು ಅದ್ಭುತ ಸಂಗತಿಯಾಗಿದೆ. ಈ ಯೋಜನೆಯನ್ನು ಪ್ರಾರಂಭಿಸಿದ ಅಂದಿನ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಎಸ್.ಕೇದಾರ್ ಹಾಗೂ ಶ್ರೀಮತಿ ಉಷಾಗಣೇಶ್ ಅವರನ್ನು ಈ ಸಂದರ್ಭದಲ್ಲಿ ಕೃತಜ್ಞತಾಪೂರ್ವಕವಾಗಿ ನೆನಪಿಸಿಕೊಳ್ಳಬೇಕಾದುದು ಅಗತ್ಯ. ಅವರಿಗೆ ನಾನು ಆಭಾರಿಯಾಗಿದ್ದೇನೆ.

 

     ಈ ಬೃಹತ್ ಯೋಜನೆಯನ್ನು ಕಾರ್ಯಗತಗೊಳಿಸಲು ತಾಂತ್ರಿಕ ತೊಡಕುಗಳನ್ನು ನಿವಾರಿಸಿಕೊಂಡು ಕನ್ನಡ ಗಣಕ ಪರಿಷತ್ತು, ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್.ಐ.ಸಿ.) ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ, ಮಹಾಭಾರತ ಸಂಶೋಧನಾ ಪ್ರತಿಷ್ಠಾನ, ಬ್ಲೂಮ್ ಕನ್ಸಲ್ಟಿಂಗ್ ಸರ್ವೀಸಸ್, ವಿಷುಯಲ್ ಆಟ್ರ್ಸ್ ಮುಂತಾದ ಹಲವಾರು ಖಾಸಗಿ ತಂತ್ರಾಂಶಗಳ ಕಂಪನಿಯವರೊಂದಿಗೆ ಸಮಾಲೋಚಿಸಿ, ಒಂದು ಮಾದರಿ ಯೋಜನೆಯನ್ನು ರೂಪಿಸಲಾಯಿತು. ಇವರೆಲ್ಲರ ಸಹಕಾರದೊಂದಿಗೆ ಒಂದು ಸಮರ್ಪಕವೆನ್ನಬಹುದಾದ ಕನ್ನಡ ತಂತ್ರಾಂಶವನ್ನು ರೂಪಿಸಲಾಯಿತು.

 

     ಈ ಬೃಹತ್ ಯೋಜನೆಯನ್ನು ಕರ್ನಾಟಕ ಸರ್ಕಾರದ ಉದ್ಯಮವಾದ ಎಂ.ಎಸ್.ಐ.ಎಲ್. ಸಂಸ್ಥೆಯ ಸಹಕಾರದಿಂದ ಅನುಷ್ಠಾನಗೊಳಿಸಲಾಯಿತು. ಇದೀಗ ಸಮಗ್ರ ವಚನಸಾಹಿತ್ಯವನ್ನು ವಿಶ್ವದಾದ್ಯಂತ ಆಸಕ್ತ ಜನ ತಾವಿರುವಲ್ಲಿಯೇ ವೀಕ್ಷಿಸುವ, ಪಠ್ಯವನ್ನು ಉಚಿತವಾಗಿ ಪಡೆದುಕೊಳ್ಳುವ ಹಾಗೂ ಆಲಿಸುವ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ.

 

     ಸಮಗ್ರ ವಚನ ಸಾಹಿತ್ಯದ ಯೋಜನೆಯಲ್ಲಿ ಸುಮಾರು 249 ಜನ ವಚನಕಾರರ, ಸುಮಾರು 21,674 ವಚನಗಳನ್ನು ಸಂಗ್ರಹಿಸಲಾಗಿದೆ. ಈ ವಚನಗಳಿಂದ ಆಯ್ದ 1000 ವಚನಗಳನ್ನು ವಿವಿಧ ಧಾಟಿಗಳಲ್ಲಿ ರಾಗ ಸಂಯೋಜಿಸಿ, ವಿವಿಧ ಗಾಯಕರಿಂದ ಹಾಡಿಸಿ, ಧ್ವನಿ ಮುದ್ರಿಸಿ, ಅಂತರ್ಜಾಲಕ್ಕೆ ಅಳವಡಿಸಲಾಗಿದೆ.

 

     ಸಮಗ್ರ ವಚನಸಾಹಿತ್ಯದ ಬಹುಮಾಧ್ಯಮ ಯೋಜನೆಯು ಅನುಷ್ಠಾನಗೊಳ್ಳಲು ಹಲವು ವಿದ್ವಾಂಸರು, ಸಂಗೀತಗಾರರು, ತಂತ್ರಜ್ಞರು ಹಾಗೂ ತಾಂತ್ರಿಕ ಪರಿಣತಿ ಹೊಂದಿರುವ ಸಲಹೆಗಾರರು ಹೀಗೆ ಹಲವಾರು ಜನರು ನೆರವಾಗಿದ್ದಾರೆ. ಈ ಯೋಜನೆಯ ಯಶಸ್ಸಿಗೆ ಕಾರಣರಾದ ಅವರೆಲ್ಲರಿಗೂ ಸರ್ಕಾರದ ಕೃತಜ್ಞತೆಗಳು.



                                                                                                              ಡಾ. ಎನ್. ನಾಗಾಂಬಿಕಾದೇವಿ
   01.03.2015                                                                                               ಮುಖ್ಯ ಕಾರ್ಯದರ್ಶಿಗಳು
   ಬೆಂಗಳೂರು                                                                                             ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಯೋಜನೆಯನ್ನು ಕುರಿತು

ಅನಾವರಣ

ಆಶಯ

ಸಾಧನೆ

ನಮ್ಮ ನುಡಿ

ಸಂಪಾದಕ ಮಂಡಳಿ

ಅಂತರಜಾಲ ತಾಣ ಕುರಿತು

ಸಂದೇಶ

ಹೊನ್ನುಡಿ

ಪ್ರಕಾಶಕರ ಮಾತು

ಕಠಿಣ ಶಬ್ದಗಳ ಅರ್ಥ

Copyright | Disclaimer | Privacy Policy | Contact us  

Powered by Bloom Consulting Services.